ಧಾರವಾಡ: ಶಾಸಕ ವಿನಯ ಕುಲಕರ್ಣಿ ಪರ ಅಭಿಮಾನಿಗಳಿಂದ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ
- ವಿನಯ್ ಕುಲಕರ್ಣಿ ವಿರುದ್ಧ ರಾಜಕೀಯ ಷಡ್ಯಂತ್ರ?
- ಕೈಗೆ ಕಪ್ಪು ಪಟ್ಟಿ ಧರಿಸಿ ಬೆಂಬಲಿಗರ ಮೌನ ಮೆರವಣಿಗೆ
- ಯೋಗೇಶಗೌಡ ಕೊಲೆ ಕೇಸ್ ತೀರ್ಪಿಗೆ ತೀವ್ರ ವಿರೋಧ
- ಮೇಲ್ಮನವಿಯಲ್ಲಿ ನ್ಯಾಯ ಸಿಗುವ ವಿಶ್ವಾಸದಲ್ಲಿ ಅಭಿಮಾನಿಗಳು
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿ, ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಧಾರವಾಡದಲ್ಲಿ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹುಬ್ಬಳ್ಳಿ-ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರದ ಕಲಾಭವನದಿಂದ ಸುಭಾಷ್ ರಸ್ತೆಯ ಕೆಸಿಸಿ ಬ್ಯಾಂಕ್ ವೃತ್ತದವರೆಗೆ ಮೌನವಾಗಿ ಹೆಜ್ಜೆ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ವಿನಯ ಕುಲಕರ್ಣಿ ಅವರ ಭಾವಚಿತ್ರವಿರುವ ಪ್ಲೆಕ್ಸ್ ಹಾಗೂ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಜನಸ್ನೇಹಿ ಹಾಗೂ ಅಭಿವೃದ್ಧಿ ಪರ ಚಿಂತನೆಯುಳ್ಳ ವಿನಯ ಕುಲಕರ್ಣಿ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿಯ ಷಡ್ಯಂತ್ರ ಹೂಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜನರ ಮನ ಗೆದ್ದಿದ್ದಾರೆ. ಅಂತಹ ನಾಯಕರ ವಿರುದ್ಧ ನಡೆಯುತ್ತಿರುವ ಈ ರಾಜಕೀಯ ಪಿತೂರಿ ತಮಗೆ ತೀವ್ರ ನೋವು ತಂದಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಅಲ್ಲದೆ, ಮೇಲ್ಮನವಿ ಸಲ್ಲಿಸಿದಾಗ ಉನ್ನತ ನ್ಯಾಯಾಲಯದಲ್ಲಿ ಶಾಸಕರಿಗೆ ಖಂಡಿತವಾಗಿಯೂ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ಅಭಿಮಾನಿಗಳು ವ್ಯಕ್ತಪಡಿಸಿದರು.
















Leave a Reply