Advertisement

ಅಮೆರಿಕ ಜೊತೆ ಮಾತುಕತೆಗೆ ಇರಾನ್ ನಕಾರ – ಕದನ ವಿರಾಮಕ್ಕೆ ಎಳ್ಳುನೀರು

[ad_1]

ಟೆಹ್ರಾನ್: ಮಧ್ಯಪ್ರಾಚ್ಯದ ಯುದ್ಧದಲ್ಲಿ ಅಮೆರಿಕಗೆ (America) ದಿನಕ್ಕೊಂದು ಮುಜುಗರ ಉಂಟಾಗುತ್ತಿದೆ. ಯಾವ ಹಾದಿಯಲ್ಲೂ ಹೋದರೂ ಇರಾನ್ (Iran) ಅಮೆರಿಕವನ್ನು ಹಿಡಿದು ಬಡಿಯುತ್ತಿದೆ. ನಿರಂತರ ಯುದ್ಧವನ್ನು ರಾಜತಾಂತ್ರಿಕ ಮೂಲಕ ನಿಲ್ಲಿಸಲು ಸಜ್ಜಾಗಿದ್ದ ಅಮೆರಿಕಗೆ ಈಗ ಇರಾನ್ ಮತ್ತೊಂದು ಕಪಾಳಮೋಕ್ಷ ಮಾಡಿದೆ. ಮಧ್ಯಸ್ತಿಕೆವಹಿಸಿ ಬೀಗುತ್ತಿದ್ದ ಪಾಕಿಸ್ತಾನಕ್ಕೂ ಈಗ ಜಾಗತಿಕವಾಗಿ ಮುಖಭಂಗವಾಗಿದೆ.

ಜಗತ್ತಿನ ದೊಡ್ಡಣ್ಣ, ನನ್ನ ಬಲಾಢ್ಯ ಶಕ್ತಿಯ ಎದುರು ಎಲ್ಲರೂ ತಲೆಬಾಗಲೇಬೇಕು ಎಂಬ ಅಹಂ ಈಗ ಕುಸಿದು ಬಿದ್ದಂತಿದೆ. ತನ್ನದಲ್ಲದ ಯುದ್ಧಕ್ಕೆ ಧುಮುಕುವ ಖಯಾಲಿ ಈಗ ಖುದ್ದು ಅಮೆರಿಕಗೆ ದುಬಾರಿಯಾಗಿ ಕಾಡುತ್ತಿದೆ. ಇರಾನ್ ಒಡ್ಡುತ್ತಿರುವ ಪ್ರತಿರೋಧಕ್ಕೆ ಅಮೆರಿಕದಂತ ಅಮೆರಿಕವೇ ಬಳಲಿ ಬೆಂಡಾಗಿ ಹೋಗಿದೆ. ಯಾವ ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡಬೇಕು ಎಂದು ಅಮೆರಿಕ ನುಗ್ಗಿತ್ತೋ ಅದೇ ಇರಾನ್‌ನ ಪ್ರತಿರೋಧದಿಂದ ಅಮೆರಿಕದ ಮಿಲಿಟರಿಯ ಪ್ರಮುಖ ಅಧಿಕಾರಿಗಳ ತಲೆದಂಡವಾಗುತ್ತಿದೆ. ಈಗ ಗಾಯದ ಮೇಲೆ ಬರೆ ಎಂಬಂತೆ ಇರಾನ್‌ನನ್ನು ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಕದನ ವಿರಾಮದ (Ceasefire) ಮಾತುಕತೆಯ ಮೇಜಿಗೆ ಕರೆದಿತ್ತು. ಆದರೆ ಅದಕ್ಕೂ ಕೂಡ ಇರಾನ್ ಸೊಪ್ಪು ಹಾಕಿಲ್ಲ. ನಾವು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆಗೆ ಕೂರಲು ಸಿದ್ಧವಿಲ್ಲ. ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇರಾನ್‌ಗೆ ಒಪ್ಪಿಗೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.

ಅಖಾಡಕ್ಕೆ ಇಳಿದ ಟರ್ಕಿ, ಈಜಿಪ್ಟ್:
ಮಾತುಕತೆ ನಡೆಸುವುದರಲ್ಲಿ ಪಾಕಿಸ್ತಾನ ವಿಫಲವಾದ ಬೆನ್ನಲ್ಲೇ ಟರ್ಕಿ ಹಾಗೂ ಈಜಿಪ್ಟ್ ಸಮಸ್ಯೆ ನಿವಾರಣೆಯ ಪ್ರಯತ್ನ ಆರಂಭಿಸಿವೆ. ಉಭಯ ದೇಶಗಳ ನಡುವೆ ಮಾತುಕತೆಯ ಪ್ರಕ್ರಿಯೆ ಆರಂಭಿಸಲು ಆತಿಥ್ಯ ವಹಿಸಲು ಹೊಸ ತಾಣಗಳನ್ನು ಪ್ರಸ್ತಾಪಿಸಲು ಈ ದೇಶಗಳು ಮುಂದಾಗಿವೆ. ಕದನ ವಿರಾಮ ಮಾತುಕತೆಗೆ ವೇದಿಕೆಯಾಗಲು ಕತಾರ್ ಹಾಗೂ ಇಸ್ತಾಂಬುಲ್ ಉತ್ಸುಕತೆ ತೋರಿವೆ ಎಂದು ಹೇಳಲಾಗಿದೆ.

ವಿಮಾನಗಳು ನಾಶಗೊಂಡರೂ ಮಾತಕತೆಗೆ ಟ್ರಂಪ್ ರೆಡಿ:
ಯುದ್ಧ ಶುರುವಾಗಿ ಈಗ ಐದನೇ ವಾರಕ್ಕೆ ಕಾಲಿಟ್ಟಿದೆ. ಕೆಲವೇ ದಿನಗಳಲ್ಲಿ ಯುದ್ಧ ಮುಗಿಸುವ ಉತ್ಸಾಹದಲ್ಲಿದ್ದ ಅಮೆರಿಕ ಮತ್ತು ಇಸ್ರೇಲ್ ಇರಾನ್ ಹೊಡೆತಕ್ಕೆ ತತ್ತರಿಸಿವೆ. ಈ 37 ದಿನಗಳ ಯುದ್ಧದಲ್ಲಿ ಅಮೆರಿಕದ ಎಫ್ ಸಿರೀಸ್‌ನ ನಾಲ್ಕು ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರಳಿಸಿದೆ. ಎಫ್ 15ಇ, ಎಫ್-15ಎಸ್, ಎಫ್-16ಎಸ್ ಮತ್ತು ಎಫ್-35 ಇವು ಅಮೆರಿಕದ ವಾಯುದಳದ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರಗಳೆಂದೇ ಕರೆಯಲಾಗಿತ್ತು. ಈಗ ಇರಾನ್ ಎದುರು ಬೂದಿಯಾಗಿವೆ. ಶುಕ್ರವಾರ ಇರಾನ್ ಯುಎಸ್‌ನ ಒಂದು ಎಫ್-15ಇ ಮತ್ತು ಒಂದು ಎ-10 ಫೈಟರ್ ಜೆಟ್‌ನ್ನು ಹೊಡೆದುರುಳಿಸಿತ್ತು. ಇಲ್ಲಿಗೆ ಮಾತುಕತೆ ಬಹುತೇಕ ಮುರಿದು ಬೀಳಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಟ್ರಂಪ್ ಯುದ್ಧ ಮತ್ತು ಮಾತುಕತೆ ಏಕಕಾಲಕ್ಕೆ ನಡೆಯುತ್ತವೆ ಅನ್ನೋ ಹೇಳಿಕೆ ನೀಡಿ ಮತ್ತೊಂದು ಅಚ್ಚರಿ ಮೂಡಿಸಿದ್ದಾರೆ.

37ನೇ ದಿನವೂ ಮುಂದುವರಿದ ದಾಳಿ – ಪ್ರತಿದಾಳಿ:
ಈ ಎಲ್ಲ ಬೆಳವಣಿಗೆಗಳ ನಡುವೆ ಮಧ್ಯಪ್ರಾಚ್ಯದ ಯುದ್ಧ ನಿಂತಿಲ್ಲ. ಮಿಸೈಲ್ ಡ್ರೋಣ್‌ಗಳ ದಾಳಿ ಮುಂದುವರಿದಿದೆ. ಇಸ್ರೇಲ್ ವಿರುದ್ಧ ತಿರುಗಿ ಬಿದ್ದಿರುವ ಹೆಜ್ಬೊಲ್ಲಾ, ಉತ್ತರ ಇಸ್ರೇಲ್‌ನ ನಹರಿಯಾ ನಗರದಲ್ಲಿರುವ ಸೇನೆಯ ಲಿಮನ್ ಬ್ಯಾರಕ್‌ಗಳ ಮೇಲೆ ದಾಳಿ ನಡೆಸಿದೆ. ಇನ್ನು ಇತ್ತ ಅಬುಧಾಬಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಕ್ಷಿಪಣಿ ಅವಶೇಷಗಳು ಟ್ಯಾಂಕ್‌ಗೆ ಬಡಿದ ಕಾರಣ ಐವರು ಭಾರತೀಯರು ಹಾಗೂ ಏಳು ನೇಪಾಳಿಗಳು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ದಾಳಿಯ ಬೆನ್ನಲ್ಲಿಯೇ ಯುಎಇ ತನ್ನ ಅನಿಲ ಉತ್ಪಾದನ ವಲಯಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಅಬುಧಾಬಿ ಮೇಲಿನ ದಾಳಿ ಬೆನ್ನಲ್ಲೇ ಇರಾನ್ ಕುವೈತ್‌ನ ಮಿನಾ ಅಲ್ ಅಹ್ಮದಿ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದೆ.. ಜೊತೆಗೆ ನಿರ್ಲವೀಕರಣದ ಘಟಕದ ಮೇಲೆಯೂ ದಾಳಿಯಿಟ್ಟಿದ್ದು ಭಾರಿ ಮಟ್ಟದ ಹಾನಿಗಳು ಸಂಭವಿಸಿವೆ.

ಮತದಾನ ಮುಂದಿನ ವಾರಕ್ಕೆ ಮುಂದೂಡಿದ ವಿಶ್ವಸಂಸ್ಥೆ:
ಹಾರ್ಮುಜ್ ಜಲಸಂಧಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಶಿಪ್ಪಿಂಗ್ ಸಂರಕ್ಷಿಸುವ ಕುರಿತಂತೆ ಬಹರೈನ್ ಪ್ರಾಯೋಜಿತ ನಿರ್ಣಯದ ಮೇಲಿನ ಮತದಾನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದಿನ ವಾರಕ್ಕೆ ಮುಂದೂಡಿದೆ. ಶುಕ್ರವಾರ ಈ ಸಂಬಂಧ ಚರ್ಚಿಸಲು ನಿರ್ಧರಿಸಲಾಗಿತ್ತು. ಬಳಿಕ ಶನಿವಾರಕ್ಕೆ ಅದನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದಕ್ಕೆ ಹಾಕಲಾಗಿದ್ದು, ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಮಂಡಳಿಯ ಅಧ್ಯಕ್ಷ ಸ್ಥಾನ ಹೊಂದಿರುವ ಬಹರೈನ್ ಗುರುವಾರ ಇದರ ಕರಡು ಸಿದ್ಧಪಡಿಸಿತ್ತು. ಈ ಆಯಕಟ್ಟಿನ ಪ್ರದೇಶಗಳಲ್ಲಿ ಕನಿಷ್ಠ ಮುಂದಿನ ಆರು ತಿಂಗಳ ಕಾಲ ಹಡಗುಗಳ ಸರಾಗ ಸಂಚಾರವನ್ನು ಖಾತರಿಪಡಿಸಲು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡುವ ನಿರ್ಣಯ ಇದಾಗಿತ್ತು.

ಇರಾನ್ ಯುದ್ಧದ ಮಧ್ಯೆ ಅಮೆರಿಕಕ್ಕೆ ನ್ಯಾಟೋ ಮುಖ್ಯಸ್ಥರ ಭೇಟಿ:
ಅಮೆರಿಕ ಮತ್ತು ನ್ಯಾಟೋ ಒಕ್ಕೂಟದ ನಡುವೆ ಭಿನ್ನಾಭಿಪ್ರಾಯ ಹೆಚ್ಚಿದ ಬೆನ್ನಲ್ಲೇ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಏಪ್ರಿಲ್ 8-12ರವರೆಗೆ ಅಮೆರಿಕ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ನ್ಯಾಟೋ ಒಳಗೆಯೂ ಭಿನ್ನಾಭಿಪ್ರಾಯ ಕಡಿಮೆ ಮಾಡಿ, ಸಂವಾದವನ್ನು ಹೆಚ್ಚಿಸುವುದು ಮತ್ತು ಮೈತ್ರಿಕೂಟದೊಳಗೆ ಬೆಳೆಯುತ್ತಿರುವ ಬಿರುಕನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.

ಅಮೆರಿಕ ಅಂದ್ರೆ ಜಗತ್ತಿನ ಇತರ ದೇಶಗಳು ಬೆದರಿ ನಿಲ್ಲುವ ಕಾಲ ಕಾಲಗರ್ಭ ಸರಿದು ಬಹಳ ವರ್ಷಗಳೇ ಕಳೆದಿವೆ. ಆದರೆ ಅಮೆರಿಕ ತಾನಿನ್ನೂ ಸೂಪರ್ ಪವರ್ ದೇಶ ಎಂಬ ಪ್ರತಿಷ್ಠೆ ಉಳಿಸಿಕೊಳ್ಳಲು ಬಡಿದಾಡುತ್ತಿದೆ. ಇರಾಕ್‌ನಲ್ಲಿ ಆಡಳಿತ ಬದಲಾವಣೆ ಮಾಡಿದ ರೀತಿಯೇ ಇರಾನ್‌ನಲ್ಲೂ ಮಾಡುತ್ತೇನೆ ಎಂಬ ಕನಸಿನೊಂದಿಗೆ ಯುದ್ಧಕ್ಕೆ ಇಳಿದ ಅಮೆರಿಕವನ್ನು ಇರಾನ್ ವಿಯೆಟ್ನಾಮ್, ಕ್ಯೂಬಾ ರೀತಿ ಕಾಡುತ್ತಿದೆ. ಅಷ್ಟು ಸುಲಭವಾಗಿ ಮಂಡಿಯೂರುತ್ತಿಲ್ಲ. ಈ ಮೂರು ದೇಶಗಳ ಮೊಂಡುತನ ಈಗ ಜಾಗತಿಕ ಆರ್ಥಿಕತೆಗೆ ಮರಣಶಾಸನ ಬರೆಯುತ್ತಿದೆ.

[ad_2]

Source link publictv.in

Leave a Reply

Your email address will not be published. Required fields are marked *