Advertisement

Iran War| ನಾಳೆಗೆ 60 ದಿನಗಳ ಡೆಡ್‌ಲೈನ್‌ ಅಂತ್ಯ – ಸಂಕಷ್ಟದಲ್ಲಿ ಟ್ರಂಪ್‌!

[ad_1]

Donald Trump sad unhappy

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (US-Iran War) ನಡುವಿನ ಮಿಲಿಟರಿ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಕಾಂಗ್ರೆಸ್(ಅಮೆರಿಕದ ಸಂಸತ್‌) ಅನುಮತಿಯಿಲ್ಲದೆ ಆರಂಭಿಸಿದ ಈ ಕಾರ್ಯಾಚರಣೆಗೆ ‘ವಾರ್ ಪವರ್ಸ್ ಆಕ್ಟ್’ ಅಡಿಯಲ್ಲಿ ನೀಡಲಾದ 60 ದಿನಗಳ ಗಡುವು ನಾಳೆಗೆ (ಮೇ 1) ಅಂತ್ಯಗೊಳ್ಳಲಿದೆ.

ಏನಿದು 60 ದಿನಗಳ ಕಾನೂನು ಗಡುವು?
ಅಮೆರಿಕದ 1973ರ ‘ವಾರ್ ಪವರ್ಸ್ ಆಕ್ಟ್’ (War Powers Act) ಪ್ರಕಾರ ಅಧ್ಯಕ್ಷರು ತುರ್ತು ಸಂದರ್ಭದಲ್ಲಿ ಕಾಂಗ್ರೆಸ್‌ನ(Congress) ಪೂರ್ವಾನುಮತಿಯಿಲ್ಲದೆ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಬಹುದು. ಆದರೆ ಅಂತಹ ಕಾರ್ಯಾಚರಣೆಯ ಬಗ್ಗೆ 48 ಗಂಟೆಗಳ ಒಳಗಾಗಿ ಕಾಂಗ್ರೆಸ್‌ಗೆ ವರದಿ ಸಲ್ಲಿಸಬೇಕು.

ಕಾರ್ಯಾಚರಣೆ ಆರಂಭವಾದ 60 ದಿನಗಳ ಒಳಗಾಗಿ ಕಾಂಗ್ರೆಸ್‌ನಿಂದ ಅಧಿಕೃತ ಅನುಮೋದನೆ ಪಡೆಯಬೇಕು. ಒಂದು ವೇಳೆ ಕಾಂಗ್ರೆಸ್ ಅನುಮೋದನೆ ನೀಡದಿದ್ದರೆ, ಅಧ್ಯಕ್ಷರು ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ.

ಇಂದಿನ ಸ್ಥಿತಿ ಏನು?
ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಫೆಬ್ರವರಿ 28 ರಂದು ಜಂಟಿಯಾಗಿ ದಾಳಿ ನಡೆಸಿತ್ತು. ಇರಾನ್‌ನ ಪರಮಾಣು ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು. ದಾಳಿ ನಡೆದ 48 ಗಂಟೆಯ ಒಳಗಡೆ ಅಂದರೆ  ಮಾರ್ಚ್ 2 ರಂದು ಇರಾನ್ ವಿರುದ್ಧದ ಮಿಲಿಟರಿ ಕ್ರಮದ ಬಗ್ಗೆ ಕಾಂಗ್ರೆಸ್‌ಗೆ ಟ್ರಂಪ್‌ ಆಡಳಿತ ಅಧಿಕೃತ ಪತ್ರ ಬರೆದಿತ್ತು.

ಆ ಪತ್ರದ ಪ್ರಕಾರ 60 ದಿನಗಳ ಕಾಲಮಿತಿ ನಾಳೆಯೇ ಪೂರ್ಣಗೊಳ್ಳುತ್ತಿದೆ. ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ (Ceasefire) ಜಾರಿಯಲ್ಲಿದ್ದರೂ ನೌಕಾ ದಿಗ್ಬಂಧನ ಮತ್ತು ಸನ್ನದ್ಧ ಸ್ಥಿತಿಯಲ್ಲಿರುವ ಸೈನ್ಯದ ಕಾರಣದಿಂದಾಗಿ ಈ ಕಾನೂನು ಗಡುವು ಇನ್ನೂ ಅನ್ವಯಿಸುತ್ತದೆ. ಇದನ್ನೂ ಓದಿ: ಅಮೆರಿಕದ ಪಾಸ್‌ಪೋರ್ಟ್‌ಗಳಲ್ಲಿ ಡೊನಾಲ್ಡ್ ಟ್ರಂಪ್ ಚಿತ್ರ

Iran Israel war

ಮುಂದಿರುವ ಆಯ್ಕೆಗಳೇನು?
– ಟ್ರಂಪ್ ಅವರು ಮಿಲಿಟರಿ ಕ್ರಮ ಮುಂದುವರಿಸಲು ಕಾಂಗ್ರೆಸ್‌ನಿಂದ ‘ಯುದ್ಧ ಘೋಷಣೆ’ ಅಥವಾ ಅಧಿಕೃತ ಸಮ್ಮತಿ ಪಡೆಯಬೇಕು.
– ಸೈನ್ಯವನ್ನು ಸುರಕ್ಷಿತವಾಗಿ ಹಿಂತೆಗೆದುಕೊಳ್ಳಲು ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಅಧ್ಯಕ್ಷರು ಹೆಚ್ಚುವರಿ 30 ದಿನಗಳ ಕಾಲಾವಕಾಶ ಕೋರಬಹುದು.
– ಕಾಂಗ್ರೆಸ್ ಅನುಮೋದನೆ ನೀಡದಿದ್ದರೆ, ಕಾನೂನಿನ ಪ್ರಕಾರ ಅಮೆರಿಕ ತನ್ನ ಪಡೆಗಳನ್ನು ಇರಾನ್ ಸಂಘರ್ಷದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕಾಗುತ್ತದೆ.

ಸಂಕಷ್ಟದಲ್ಲಿ ಟ್ರಂಪ್‌:
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಶೇ.60ಕ್ಕಿಂತ ಹೆಚ್ಚು ಅಮೆರಿಕನ್ನರು ಇರಾನ್‌ ವಿರುದ್ಧದ ಯುದ್ಧವನ್ನು ವಿರೋಧಿಸುತ್ತಿದ್ದಾರೆ. ಕೆಲವು ರಿಪಬ್ಲಿಕನ್ ಸಂಸದರು (ಉದಾಹರಣೆಗೆ ಸೆನೆಟರ್ ಜಾನ್ ಕರ್ಟಿಸ್) ಮೇ 1ರ ನಂತರ ಕಾಂಗ್ರೆಸ್ ಅನುಮತಿಯಿಲ್ಲದೆ ಯುದ್ಧ ಮುಂದುವರಿಸುವುದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಈಗಾಗಲೇ ಎಚ್ಚರಿಸಿದ್ದಾರೆ.

ಯುದ್ಧದಿಂದಾಗಿ ಏರಿಕೆಯಾಗಿರುವ ತೈಲ ಬೆಲೆಗಳು ಟ್ರಂಪ್ ಆಡಳಿತದ ಮೇಲೆ ಆರ್ಥಿಕ ಒತ್ತಡ ಹೇರುತ್ತಿವೆ. ಹೀಗಾಗಿ ಟ್ರಂಪ್‌ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ರಾಜಕೀಯ ಸಂಘರ್ಷ:
ಟ್ರಂಪ್‌ ಈ ಗಡುವನ್ನು ನಿರ್ಲಕ್ಷಿಸುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷವಾದ ಡೆಮೋಕ್ರಾಟ್ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಟ್ರಂಪ್ ಅವರು ಕಾಂಗ್ರೆಸ್ ನಿರ್ಣಯವನ್ನು ಮೀರಿದರೆ ಇದು ಅಮೆರಿಕದಲ್ಲಿ ದೊಡ್ಡ ಮಟ್ಟದ ಸಂವಿಧಾನಾತ್ಮಕ ಬಿಕ್ಕಟ್ಟಿಗೆ (Constitutional Crisis) ದಾರಿ ಮಾಡಿಕೊಡಲಿದೆ. ಪ್ರಸ್ತುತ ಜಗತ್ತಿನ ಕಣ್ಣು ನಾಳೆಯ ಟ್ರಂಪ್‌ ಸರ್ಕಾರದ ನಿರ್ಧಾರದ ಮೇಲೆ ನೆಟ್ಟಿದೆ.‌

[ad_2]

Source link publictv.in

Leave a Reply

Your email address will not be published. Required fields are marked *