Advertisement

ಮಂಗಳೂರಲ್ಲಿ ಅಚ್ಚರಿ ಘಟನೆ -3 ಮನೆಗಳ ಬಾವಿಗಳಲ್ಲಿ ಉಕ್ಕಿ ಬಂದ ಡೀಸೆಲ್

[ad_1]

ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮದಿಂದ ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದೆ. ಆದರೆ ಈ ನಡುವೆ ಮಂಗಳೂರಿನಲ್ಲಿ (Mangalore) ಅತ್ಯಂತ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮನೆಗಳ ಬಾವಿಗಳಲ್ಲಿ ದಿಢೀರನೆ ನೀರಿನೊಂದಿಗೆ ಡೀಸೆಲ್ (Diesel) ಉಕ್ಕಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಹೌದು, ನಗರದ ಕಾವೂರು ಎಂಬ ಪ್ರದೇಶದ ಮೂರು ಮನೆಗಳ ಬಾವಿಯಲ್ಲಿ ಏಕಾಏಕಿ ಡೀಸೆಲ್ ಪತ್ತೆಯಾಗಿದೆ. ಬಾವಿಯ ನೀರಿನಲ್ಲಿ ಬೇರೆ ಯಾವುದೇ ಕಲ್ಮಶಗಳಲ್ಲ, ಬರೋಬ್ಬರಿ ಶೇ 28 ರಷ್ಟು ಶುದ್ಧ ಡೀಸೆಲ್ ಅಂಶ ಇರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ದೃಢಪಟ್ಟಿದ್ದು, ಈ ವಿಚಿತ್ರ ವಿದ್ಯಮಾನ ಇಡೀ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಬಾವಿಯ ನೀರನ್ನು ಎಷ್ಟು ಬಾರಿ ಮೋಟಾರ್ ಹಾಕಿ ಪೂರ್ತಿ ಖಾಲಿ ಮಾಡಿದರೂ ಸಹ, ಮತ್ತೆ ಜಿನುಗುವ ನೀರಿನೊಂದಿಗೆ ಡೀಸೆಲ್‌ನ ದಪ್ಪನೆಯ ಪದರ ಮೇಲೇಳುತ್ತಲೇ ಇದೆ. ಇದರಿಂದಾಗಿ ಕಾವೂರಿನ ಈ ಕುಟುಂಬಗಳಿಗೆ ಕುಡಿಯುವ ನೀರು ಇರಲಿ, ಕನಿಷ್ಠ ಮನೆ ಬಳಕೆ ಅಥವಾ ಪಾತ್ರೆ ತೊಳೆಯಲೂ ನೀರಿಲ್ಲದಂತಾಗಿದೆ. ಮನೆಗಳ ಅತ್ಯಂತ ಸಮೀಪದಲ್ಲೇ ಪೆಟ್ರೋಲ್ ಬಂಕ್‌ ಒಂದಿದ್ದು, ಅದರ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದಲೇ ಡೀಸೆಲ್ ಲೀಕ್ ಆಗಿ ಅಂತರ್ಜಲ ಸೇರಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ, ‘ನಮ್ಮ ಡೀಸೆಲ್ ಸ್ಟಾಕ್‌ನಲ್ಲಿ ಯಾವುದೇ ವ್ಯತ್ಯಾಸ ಬಂದಿಲ್ಲ, ಸೋರಿಕೆಯೂ ಆಗುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವ ಸೌಜನ್ಯ ತೋರಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ರಹಸ್ಯ ಸೋರಿಕೆ ಹೇಗೆ ಆಗುತ್ತಿದೆ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಿ, ಇಡೀ ಪ್ರದೇಶದ ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯಬೇಕೆಂದು ಕಾವೂರು ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

banner

ಒಟ್ಟಿನಲ್ಲಿ ಈ ಸಮಸ್ಯೆಯ ಮೂಲ ಯಾವುದು ಎಂಬುದೇ ಯಕ್ಷಪ್ರಶ್ನೆಯಾಗಿದೆ. ತಕ್ಷಣ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ



[ad_2]

Source link

Leave a Reply

Your email address will not be published. Required fields are marked *