Advertisement

Explainer| ಒಂದೇ ಒಂದು ಪೋಸ್ಟ್‌, ಸಾವಿರಾರು ಕೋಟಿ ಲಾಭ – ಬಿರುಗಾಳಿ ಎಬ್ಬಿಸಿದ ಟ್ರಂಪ್ ಟ್ರೇಡಿಂಗ್ ಆಟ

[ad_1]

Trump 1

ರಂಭದಲ್ಲಿ ಜಾಗತಿಕ ಸುಂಕದ ಸಮರ, ಆ ಬಳಿಕ ಯುದ್ಧದ ಆತಂಕದ ನಿರ್ಧಾರಗಳು, ಇವೆಲ್ಲದರ ನಡುವೆ ತಮ್ಮದೇ ‘ಟ್ರೂಥ್ ಸೋಷಿಯಲ್’ (Truth Social) ಜಾಲತಾಣದಲ್ಲಿ ಪ್ರಕಟಿಸುವ ಒಂದೊಂದು ಪೋಸ್ಟ್‌ಗಳು! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಜಾಗತಿಕ ಮಾರುಕಟ್ಟೆಯೊಂದಿಗೆ ಆಟವಾಡುತ್ತಿದ್ದಾರಾ ಎಂಬ ಅನುಮಾನವೀಗ ದಟ್ಟವಾಗಿದೆ. ಎರಡನೇ ಬಾರಿಗೆ ಶ್ವೇತಭವನದ ಗದ್ದುಗೆ ಏರಿದ ಬೆನ್ನಲ್ಲೇ ಟ್ರಂಪ್ ಅವರ ವೈಯಕ್ತಿಕ ಹೂಡಿಕೆಗಳು ಮತ್ತು ಸಾರ್ವಜನಿಕ ಹೇಳಿಕೆಗಳು ಇನ್‌ಸೈಡ್ ಟ್ರೇಡಿಂಗ್ (Insider Trading) ಹಾಗೂ ಮಾರುಕಟ್ಟೆ ಮ್ಯಾನಿಪ್ಯುಲೇಷನ್ (Market Manipulation) ವಿವಾದದ ಸುಳಿಗೆ ಸಿಲುಕಿವೆ.

ಏನಿದು ಇನ್‌ಸೈಡರ್‌ ಟ್ರೇಡಿಂಗ್‌?
ಇನ್‌ಸೈಡರ್ ಟ್ರೇಡಿಂಗ್ – ಕಂಪನಿಯೊಂದರ ಅಥವಾ ಸರ್ಕಾರದ ಅತ್ಯಂತ ಗೌಪ್ಯ ಹಾಗೂ ಆಂತರಿಕ ನಿರ್ಧಾರಗಳು ಸಾರ್ವಜನಿಕರಿಗೆ ತಿಳಿಯುವ ಮುನ್ನವೇ, ಆ ರಹಸ್ಯ ಮಾಹಿತಿಯನ್ನು ಬಳಸಿಕೊಂಡು ಷೇರುಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದಾಗಿದೆ. ಇದು ಜಾಗತಿಕವಾಗಿ ಸಂಪೂರ್ಣ ಕಾನೂನುಬಾಹಿರ.

ಮಾರುಕಟ್ಟೆ ಮ್ಯಾನಿಪ್ಯುಲೇಷನ್- ಅಧಿಕಾರ ಅಥವಾ ಪ್ರಭಾವ ಬಳಸಿ ಕೃತಕವಾಗಿ ಷೇರುಗಳ ಬೆಲೆಯನ್ನು ಏರಿಸುವುದು ಅಥವಾ ಇಳಿಸುವುದಾಗಿದೆ. ಟ್ರಂಪ್ ತಮ್ಮ ಹೇಳಿಕೆಗಳ ಮೂಲಕ ಇದನ್ನೇ ಮಾಡುತ್ತಿದ್ದಾರೆ ಎಂಬುದು ಸದ್ಯದ ಗಂಭೀರ ಆರೋಪ.

ಟ್ರಂಪ್‌ ಆಟ ಹೇಗೆ?
ಮೇ 2026 ರಲ್ಲಿ ಬಿಡುಗಡೆಯಾದ ಅಧಿಕೃತ ಯುಎಸ್ ಎಥಿಕ್ಸ್ (US Ethics) ವರದಿಯ ಪ್ರಕಾರ, ಟ್ರಂಪ್ ಅವರ ಹೆಸರಿನಲ್ಲಿರುವ ಖಾತೆಗಳು 2026ರ ಮೊದಲ ಮೂರೇ ತಿಂಗಳಲ್ಲಿ (ಜನವರಿ – ಮಾರ್ಚ್) ಬರೋಬ್ಬರಿ 3,642 ಕ್ಕೂ ಹೆಚ್ಚು ಷೇರು ವಹಿವಾಟುಗಳನ್ನು ನಡೆಸಿವೆ. ಈ ವಹಿವಾಟಿನ ಒಟ್ಟು ಮೌಲ್ಯ ಸುಮಾರು 220 ಮಿಲಿಯನ್ ಡಾಲರ್‌ನಿಂದ (2,115 ಕೋಟಿ ರೂ.) 750 ಮಿಲಿಯನ್ ಡಾಲರ್‌ (7,212 ಕೋಟಿ ರೂ.) ಇರಬಹುದು ಎಂದು ಅಂದಾಜಿಸಲಾಗಿದೆ. ಸರ್ಕಾರದ ನೀತಿಗಳಿಂದ ನೇರ ಲಾಭ ಪಡೆಯುವ Nvidia, Apple, Microsoft, Amazon, Boeing ಮತ್ತು Eli Lilly ನಂತಹ ದೈತ್ಯ ಕಂಪನಿಗಳ ಷೇರುಗಳನ್ನು ಟ್ರಂಪ್ ಪೋರ್ಟ್‌ಫೋಲಿಯೋ ಭಾರೀ ಪ್ರಮಾಣದಲ್ಲಿ ಖರೀದಿ-ಮಾರಾಟ ಮಾಡಿದೆ.

ಲಾಭ ಮಾಡಿಕೊಂಡಿದ್ದು ಹೇಗೆ?
1. ಇರಾನ್ ದಾಳಿ ಮುಂದೂಡಿಕೆ ಮತ್ತು ತೈಲ ಬೆಟ್ಟಿಂಗ್
ಇರಾನ್ ದೇಶದ ಇಂಧನ ಮೂಲಗಳ ಮೇಲಿನ ಜಂಟಿ ದಾಳಿಯನ್ನು ಮುಂದೂಡುತ್ತಿರುವುದಾಗಿ ಟ್ರಂಪ್ ‘Truth Social’ ನಲ್ಲಿ ಪೋಸ್ಟ್ ಮಾಡುವ ಕೆಲವೇ ನಿಮಿಷಗಳ ಮೊದಲು ತೈಲ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬೆಟ್ಟಿಂಗ್ ನಡೆದಿತ್ತು. ಈ ಮುಂಚಿತ ಮಾಹಿತಿ ಸೋರಿಕೆಯಿಂದ ಕೆಲವು ಆಪ್ತ ಟ್ರೇಡಿಂಗ್ ಸಂಸ್ಥೆಗಳು ಕೋಟ್ಯಂತರ ಡಾಲರ್ ಲಾಭ ಮಾಡಿಕೊಂಡಿವೆ. ಸದ್ಯ ಯುಎಸ್ ಮಾರುಕಟ್ಟೆ ನಿಯಂತ್ರಕ ಸಂಸ್ಥೆ (CFTC) ಇದರ ತನಿಖೆ ನಡೆಸುತ್ತಿದೆ.

2. “ಖರೀದಿಸಲು ಇದು ಸೂಕ್ತ ಸಮಯ” ಎಂಬ ಒಂದೇ ಒಂದು ಪೋಸ್ಟ್!
ಜಾಗತಿಕ ಸುಂಕಗಳನ್ನು (Tariffs) ತಾತ್ಕಾಲಿಕವಾಗಿ ರದ್ದುಗೊಳಿಸುವ ಪ್ರಮುಖ ನಿರ್ಧಾರವನ್ನು ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು, ಟ್ರಂಪ್ “ಇದು ಖರೀದಿಸಲು ಅತ್ಯುತ್ತಮ ಸಮಯ” (This is a great time to buy) ಎಂದು ಪೋಸ್ಟ್ ಮಾಡಿದ್ದರು. ನಿರ್ಧಾರ ಹೊರಬಿದ್ದ ತಕ್ಷಣ ಜಾಗತಿಕ ಷೇರು ಮಾರುಕಟ್ಟೆಗಳು ಶೇ.10 ರಷ್ಟು ಏರಿದ್ದವು.

3. ಯುದ್ಧದ ಸಮಯದಲ್ಲೂ ಕೋಟಿ ಕೋಟಿ ಲಾಭ!
ಮಾರ್ಚ್ 2026 ರಲ್ಲಿ ಇರಾನ್ ಯುದ್ಧದ ಆರಂಭದ ಸಮಯದಲ್ಲಿ ಜಾಗತಿಕ ಷೇರು ಮಾರುಕಟ್ಟೆ (S&P 500) ಶೇ.8 ರಷ್ಟು ಕುಸಿದಾಗ, ಟ್ರಂಪ್ ಖಾತೆಗಳು ಅಗ್ಗದ ಬೆಲೆಗೆ ಷೇರುಗಳನ್ನು ಬಾಚಿಕೊಂಡವು. ನಂತರ ಮಾರುಕಟ್ಟೆ ಶೇ. 19 ರಷ್ಟು ಜಿಗಿದಾಗ ಭಾರಿ ಲಾಭಕ್ಕೆ ಮಾರಿಕೊಂಡವು.  ಇದನ್ನೂ ಓದಿ: ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?

Nvidia ಜ್ಯಾಕ್‌ಪಾಟ್: ಅಮೆರಿಕ ಸರ್ಕಾರವು ಎನ್‌ವಿಡಿಯಾ ಚಿಪ್ಸ್‌ಗಳನ್ನು ಚೀನಾಕ್ಕೆ ರಫ್ತು ಮಾಡಲು ಅನುಮೋದನೆ ನೀಡುವ ಕೇವಲ ಒಂದು ವಾರ ಮೊದಲು ಟ್ರಂಪ್ ಖಾತೆಯು 1 ಮಿಲಿಯನ್ ಡಾಲರ್‌ ಮೌಲ್ಯದ ಎನ್‌ವಿಡಿಯಾ ಷೇರು ಖರೀದಿಸಿತ್ತು. ನಿರ್ಧಾರ ಪ್ರಕಟವಾದ ತಕ್ಷಣ ಷೇರು ಶರವೇಗದಲ್ಲಿ ಜಿಗಿಯಿತು.

ರಕ್ಷಣಾ ವಲಯದ ಹೂಡಿಕೆ: ಅಮೆರಿಕದ ರಕ್ಷಣಾ ಬಜೆಟ್ ಹೆಚ್ಚಳ ಮತ್ತು ಹೊಸ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೇ ರಕ್ಷಣಾ ವಲಯದ ದೈತ್ಯ ಕಂಪನಿಗಳಾದ ಲಾಕ್‌ಹೀಡ್ ಮಾರ್ಟಿನ್ ಮತ್ತು ಬೋಯಿಂಗ್ ಕಂಪನಿಗಳಲ್ಲಿ ಟ್ರಂಪ್ ಹೂಡಿಕೆ ಮಾಡಿದ್ದರು.

ಡೆಲ್ ಕಂಪ್ಯೂಟರ್ ವಿವಾದ
ಮೇ 2026 ರ ಆರಂಭದಲ್ಲಿ ಶ್ವೇತಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೆಲ್ ಕಂಪನಿಯನ್ನು ಬಹಿರಂಗವಾಗಿ ಹೊಗಳಿದ್ದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಟ್ರಂಪ್, “ಎಲ್ಲರೂ ಹೊರಗೆ ಹೋಗಿ ಡೆಲ್ ಕಂಪ್ಯೂಟರ್‌ಗಳನ್ನು ಖರೀದಿಸಿ, ಅವು ಅತ್ಯುತ್ತಮವಾಗಿವೆ” (Go out and buy a Dell! They’re great) ಎಂದು ಕರೆ ನೀಡಿದ್ದರು. ದೇಶದ ಅಧ್ಯಕ್ಷರಿಂದಲೇ ಇಂತಹ ಹೇಳಿಕೆ ಹೊರಬಿದ್ದ ತಕ್ಷಣ ಹೂಡಿಕೆದಾರರಲ್ಲಿ ಭಾರಿ ಉತ್ಸಾಹ ಕಂಡುಬಂದು, ಡೆಲ್ ಷೇರು ಒಂದೇ ದಿನದಲ್ಲಿ ಶೇ.13 ರಿಂದ 14 ಕ್ಕಿಂತ ಹೆಚ್ಚು ಜಿಗಿತ ಕಂಡಿತು.

ಷೇರು ಏರಿಕೆಆದ ಬೆನ್ನಲ್ಲೇ ಮತ್ತೊಂದು ಸುದ್ದಿಯ ಹೊರಬಂತು. ಡೆಲ್ ಕಂಪನಿಯ ಸಂಸ್ಥಾಪಕ ಮೈಕೆಲ್ ಡೆಲ್ ಮತ್ತು ಅವರ ಕುಟುಂಬವು ಟ್ರಂಪ್ ಅವರ ಮಹತ್ವಾಕಾಂಕ್ಷೆಯ ‘ಇನ್ವೆಸ್ಟ್ ಅಮೆರಿಕಾ’ (Invest America / ಹೊಸದಾಗಿ ಹುಟ್ಟುವ ಮಕ್ಕಳಿಗೆ ನೆರವು ನೀಡುವ ಯೋಜನೆ) ನಿಧಿಗೆ 6.25 ಬಿಲಿಯನ್ ಡಾಲರ್‌ (ಸುಮಾರು 52 ಸಾವಿರ ಕೋಟಿ ರೂ.) ಮೌಲ್ಯದ ಷೇರುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ದೇಣಿಗೆ ನೀಡಿದ ಬೆನ್ನಲ್ಲೇ ಟ್ರಂಪ್ ಅವರು ಕಂಪನಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಿದ್ದರಿಂದ ಇದು ಹಿತಾಸಕ್ತಿ ಸಂಘರ್ಷ ಮತ್ತು ಷೇರು ಮ್ಯಾನಿಪ್ಯುಲೇಷನ್ (Stock Pumping) ಆಪಾದನೆಗಳಿಗೆ ಕಾರಣವಾಗಿದೆ.

ಟ್ರಂಪ್ ಅವರು ಶ್ವೇತಭವನದಲ್ಲಿ ಡೆಲ್ ಕಂಪನಿಯನ್ನು ಸಾರ್ವಜನಿಕವಾಗಿ ಪ್ರಶಂಸಿಸುವ ಕೇವಲ 9 ದಿನಗಳ ಮುಂಚೆಯಷ್ಟೇ ತಮ್ಮ ವೈಯಕ್ತಿಕ ಪೋರ್ಟ್‌ಫೋಲಿಯೋ ಮೂಲಕ ಕನಿಷ್ಠ 10 ಲಕ್ಷ ಡಾಲರ್ (ಅಂದಾಜು 8.3 ಕೋಟಿ ರೂ.) ಮೌಲ್ಯದ ಡೆಲ್ ಷೇರುಗಳನ್ನು ಖರೀದಿಸಿದ್ದರು. ಇದು ನೇರವಾದ ‘ಸ್ಟಾಕ್ ಪಂಪಿಂಗ್’ (Stock Pumping) ಮತ್ತು ಹಿತಾಸಕ್ತಿ ಸಂಘರ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಕೃತಕ ಮ್ಯಾನಿಪ್ಯುಲೇಷನ್ ಹೇಗೆ?
ಈ ಹಗರಣದಲ್ಲಿ ಟ್ರಂಪ್ ಅವರ ಸ್ವಂತ ಜಾಲತಾಣವಾದ ‘Truth Social’ ಒಂದು ಪ್ರಮುಖ ಅಸ್ತ್ರವಾಗಿದೆ. ಟ್ರಂಪ್ ಯಾವುದೇ ಅಧಿಕೃತ ಪ್ರಕಟಣೆಯನ್ನು ಶ್ವೇತಭವನದ ಮಾಧ್ಯಮ ಗೋಷ್ಠಿಗಿಂತ ಮೊದಲು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ.

ಬೆಳಗ್ಗೆ 6:40 – ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇರುವುದಿಲ್ಲ.
ಬೆಳಗ್ಗೆ 6:49 – ಮಾರುಕಟ್ಟೆಯಲ್ಲಿ ಹಠಾತ್ ಆಗಿ ಅತಿ ದೊಡ್ಡ ಪ್ರಮಾಣದ ಟ್ರೇಡಿಂಗ್ ಆರಂಭವಾಗುತ್ತದೆ.
ಬೆಳಗ್ಗೆ 7:05 – ಟ್ರಂಪ್ ತಮ್ಮ Truth Social ನಲ್ಲಿ ಜಾಗತಿಕ ಮಾರುಕಟ್ಟೆಯನ್ನು ಬದಲಿಸುವ ಪೋಸ್ಟ್ ಪ್ರಕಟಿಸುತ್ತಾರೆ.
ಬೆಳಗ್ಗೆ 7:10 – ನಿಮಿಷಗಳಲ್ಲೇ ಮಾರುಕಟ್ಟೆ ಜಿಗಿಯುತ್ತದೆ, ರಹಸ್ಯ ಟ್ರೇಡರ್‌ಗಳು ಸಾವಿರಾರು ಕೋಟಿ ಲಾಭದೊಂದಿಗೆ ಎಕ್ಸಿಟ್ ಆಗುತ್ತಾರೆ. ಇದು ಮಾರುಕಟ್ಟೆಯ ನಿಯಮಗಳ ಪ್ರಕಾರ ಮುಂಚಿತವಾಗಿಯೇ ಮಾಹಿತಿ ಸೋರಿಕೆಯಾಗಿದೆ ಎಂಬುದಕ್ಕೆ “ಟೆಕ್ಸ್ಟ್‌ಬುಕ್ ಸಾಕ್ಷಿ” ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರೆಡಿಕ್ಷನ್ ಮಾರ್ಕೆಟ್‌ ಮತ್ತು ಕ್ರಿಪ್ಟೋ ಬೆಟ್ಟಿಂಗ್ ಲಿಂಕ್‌
ಷೇರು ಮಾರುಕಟ್ಟೆ ಮಾತ್ರವಲ್ಲದೆ, ಈ ಹಗರಣದ ಕೊಂಡಿಗಳು Polymarket ಮತ್ತು Kalshi ನಂತಹ ಕ್ರಿಪ್ಟೋ ಆಧಾರಿತ ‘ಪ್ರೆಡಿಕ್ಷನ್ ಮಾರ್ಕೆಟ್‌’ (ಭವಿಷ್ಯದ ವಿದ್ಯಮಾನಗಳ ಮೇಲೆ ಬೆಟ್ಟಿಂಗ್ ಕಟ್ಟುವ ಜಾಲತಾಣಗಳು) ವರೆಗೂ ಹರಡಿವೆ. ಏಪ್ರಿಲ್ 7, 2026 ರಂದು ಟ್ರಂಪ್ ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು (Ceasefire) ಘೋಷಿಸುವ ಕೇವಲ ಕೆಲವು ಗಂಟೆಗಳ ಮೊದಲು ಹಲವಾರು ನಿಗೂಢ ಕ್ರಿಪ್ಟೋ ಖಾತೆಗಳು ತೈಲ ಬೆಲೆ ಕುಸಿಯುತ್ತದೆ ಎಂದು ಬರೋಬ್ಬರಿ 950 ಮಿಲಿಯನ್ (ಸುಮಾರು 8,000 ಕೋಟಿ ರೂ.ಗೂ ಹೆಚ್ಚು) ಬೆಟ್ಟಿಂಗ್ ಮಾಡಿದ್ದವು. ಟ್ರಂಪ್ ಪೋಸ್ಟ್ ಪ್ರಕಟಿಸುತ್ತಿದ್ದಂತೆ ತೈಲ ಬೆಲೆ ಶೇ 15 ರಷ್ಟು ಕುಸಿದು, ಈ ಖಾತೆದಾರರು ಭಾರೀ ಲಾಭ ಮಾಡಿಕೊಂಡಿದ್ದಾರೆ. ತನಿಖಾ ತಜ್ಞರ ಪ್ರಕಾರ, ಒಂದೇ ದೊಡ್ಡ ಅಕೌಂಟ್ ಅನ್ನು ಹತ್ತಾರು ಸಣ್ಣ ವಾಲೆಟ್‌ಗಳಾಗಿ ವಿಂಗಡಿಸಿ (Wallet-splitting) ಈ ಬೆಟ್ಟಿಂಗ್ ನಡೆಸಲಾಗಿದೆ. ಇದರ ಹಿಂದೆ ಶ್ವೇತಭವನದ ಅತ್ಯಂತ ಒಳಗಿನ ವ್ಯಕ್ತಿಗಳ ಕೈವಾಡವಿದೆ ಎಂಬ ಗಂಭೀರ ಆರೋಪವಿದೆ.

ಟ್ರಂಪ್ ತಂಡದ ಸಮರ್ಥನೆ ಏನು?
ಈ ಭಾರೀ ವಿವಾದಕ್ಕೆ ಸಂಬಂಧಿಸಿದಂತೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ಮತ್ತು ಟ್ರಂಪ್ ಕುಟುಂಬದವರು ವಿಭಿನ್ನ ಸಮರ್ಥನೆ ನೀಡಿದ್ದಾರೆ. ಟ್ರಂಪ್‌ ಅವರು ತಮ್ಮ ಬ್ಲೈಂಡ್ ಟ್ರಸ್ಟ್ (Blind Trust) ಸಂಪತ್ತನ್ನು ಸ್ವತಃ ನಿರ್ವಹಿಸುತ್ತಿಲ್ಲ. ಅದು ಸ್ವತಂತ್ರ ಹಣಕಾಸು ಸಲಹೆಗಾರರ (Wealth Advisors) ಮೂಲಕ ನಿರ್ವಹಿಸಲ್ಪಡುತ್ತಿದೆ. ಟ್ರಂಪ್ ಓವಲ್ ಆಫೀಸ್‌ನಲ್ಲಿ ಕುಳಿತು ವೈಯಕ್ತಿಕವಾಗಿ ಷೇರು ಟ್ರೇಡಿಂಗ್ ಮಾಡುತ್ತಿಲ್ಲ ಎನ್ನುವುದು ಅವರ ವಾದ. ಬ್ಲೈಂಡ್ ಟ್ರಸ್ಟ್ ಎಂದು ಹೇಳಲಾಗುತ್ತಿದ್ದರೂ, ಆ ಟ್ರಸ್ಟ್ ಅನ್ನು ಮುನ್ನಡೆಸುತ್ತಿರುವುದು ಟ್ರಂಪ್ ಅವರ ಸ್ವಂತ ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತರು. ಹೀಗಾಗಿ ಶ್ವೇತಭವನದ ರಹಸ್ಯಗಳು ಟ್ರಸ್ಟ್‌ಗೆ ತಲುಪುವುದು ತೀರಾ ಸುಲಭ ಎಂಬುದು ವಿಪಕ್ಷಗಳ ಆರೋಪ.

ಟ್ರಂಪ್‌ ವಿರುದ್ಧ ಕಾನೂನು ಕ್ರಮ ಸಾಧ್ಯವೇ?
ಅಮೆರಿಕದ ಕಾನೂನಿನಲ್ಲಿ ದೇಶದ ಅಧ್ಯಕ್ಷರಿಗೆ ಅಧಿಕಾರಾವಧಿಯಲ್ಲಿ ಷೇರು ವ್ಯವಹಾರ ನಡೆಸಲು ಸಂಪೂರ್ಣ ನಿಷೇಧವಿಲ್ಲ. ಆದರೆ ಹಿತಾಸಕ್ತಿ ಸಂಘರ್ಷ ತಡೆಯಲು ಕಳೆದ 70 ವರ್ಷಗಳಿಂದ ಹಿಂದಿನ ಎಲ್ಲಾ ಅಧ್ಯಕ್ಷರುಗಳು ತಮ್ಮ ಆಸ್ತಿಯನ್ನು ಇಂತಹ ವ್ಯವಹಾರಗಳಿಂದ ದೂರ ಇಡುತ್ತಿದ್ದರು. ಟ್ರಂಪ್ ಈ 70 ವರ್ಷಗಳ ಸಂಪ್ರದಾಯವನ್ನು ಮುರಿದಿದ್ದಿದ್ದಾರೆ.

ಈ ಭಾರಿ ವಿವಾದಕ್ಕೆ ಸಂಬಂಧಿಸಿದಂತೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ಮತ್ತು ಟ್ರಂಪ್ ಅವರ ಕುಟುಂಬದವರು ತಮ್ಮದೇ ಆದ ಸಮರ್ಥನೆ ನೀಡಿದ್ದಾರೆ ಬ್ಲೈಂಡ್ ಟ್ರಸ್ಟ್ (Blind Trust): ಟ್ರಂಪ್ ಅವರ ಸಂಪತ್ತನ್ನು ಸ್ವತಃ ಅವರೇ ನಿರ್ವಹಿಸುತ್ತಿಲ್ಲ. ಅದು ‘ಬ್ಲೈಂಡ್ ಟ್ರಸ್ಟ್’ ಮತ್ತು ಸ್ವತಂತ್ರ ಹಣಕಾಸು ಸಲಹೆಗಾರರ (Wealth Advisors) ಮೂಲಕ ನಿರ್ವಹಿಸಲ್ಪಡುತ್ತಿದೆ. ಟ್ರಂಪ್ ಓವಲ್ ಆಫೀಸ್‌ನಲ್ಲಿ ಕುಳಿತು ವೈಯಕ್ತಿಕವಾಗಿ ಷೇರುಗಳನ್ನು ಖರೀದಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಅಮೆರಿಕದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳಾದ SEC (Securities and Exchange Commission) ಮತ್ತು CFTC (Commodity Futures Trading Commission) ಮೇಲೆ ಈ ವಹಿವಾಟುಗಳ ತನಿಖೆ ನಡೆಸಲು ಭಾರಿ ಒತ್ತಡವಿದೆ. ಆದರೆ ಟ್ರಂಪ್ ಅವರೇ ದೇಶದ ಸರ್ವೋಚ್ಚ ಅಧಿಕಾರಿಯಾಗಿರುವುದರಿಂದ ಈ ತನಿಖಾ ಸಂಸ್ಥೆಗಳು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸವಾಲಿನ ಕೆಲಸವಾಗಿದೆ.

ಅಮೆರಿಕಾದಲ್ಲಿ ಜನಪ್ರತಿನಿಧಿಗಳು ಇನ್‌ಸೈಡ್ ಟ್ರೇಡಿಂಗ್ ಮಾಡುವುದನ್ನು ತಡೆಯಲು ‘ಸ್ಟಾಕ್ ಆಕ್ಟ್’ (STOCK Act – Stop Trading on Congressional Knowledge) ಎಂಬ ಕಾನೂನಿದೆ. ಆದರೆ ಟ್ರಂಪ್ ಅವರ ವಿಷಯದಲ್ಲಿ ಇದು ಸಂಪೂರ್ಣವಾಗಿ ವಿಫಲವಾಗಿದೆ. ಈ ಕಾಯ್ದೆಯು ಸಂಸದರಿಗೆಕಠಿಣವಾಗಿದೆ, ಆದರೆ ಅಧ್ಯಕ್ಷರ ಹುದ್ದೆಗೆ ಕೆಲವು ತಾಂತ್ರಿಕ ವಿನಾಯಿತಿಗಳಿವೆ.

ತನಿಖಾ ಸಂಸ್ಥೆಗಳ ಕೈ ಕಟ್ಟಿ ಹಾಕಿರುವುದೇಕೆ?
ವಿರೋಧ ಪಕ್ಷದದ ಸಂಸದರು ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳಾದ SEC (Securities and Exchange Commission) ಮತ್ತು CFTC (Commodity Futures Trading Commission) ತುರ್ತು ತನಿಖೆ ನಡೆಸಲು ಅಧಿಕೃತ ಪತ್ರ ಬರೆದಿದ್ದಾರೆ. ಆದರೆ ತನಿಖೆ ನಡೆಯುವುದು ಕಷ್ಟ ಎನ್ನಲಾಗುತ್ತಿದೆ.

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಅಪರಾಧಗಳನ್ನು ತನಿಖೆ ಮಾಡುವ ಜಸ್ಟಿಸ್ ಡಿಪಾರ್ಟ್‌ಮೆಂಟ್‌ನ ಪಬ್ಲಿಕ್ ಇಂಟೆಗ್ರಿಟಿ ಸೆಕ್ಷನ್ (Public Integrity Section) ವಕೀಲರ ಸಂಖ್ಯೆಯನ್ನು 36 ರಿಂದ ಕೇವಲ ಇಬ್ಬರಿಗೆ ಇಳಿಸಲಾಗಿದೆ. ಟ್ರಂಪ್ ಅವರ ಆಪ್ತ ವಲಯದ ಹಗರಣಗಳನ್ನು ತನಿಖೆ ಮಾಡಲು ಮುಂದಾಗಿದ್ದ SEC ಉನ್ನತ ಜಾರಿ ಅಧಿಕಾರಿಯೊಬ್ಬರು ಶ್ವೇತಭವನದ ಒತ್ತಡಕ್ಕೆ ಮಣಿದು ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದಾರೆ.

ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ, ಶ್ವೇತಭವನವು ತನ್ನ ಎಲ್ಲಾ ಸಿಬ್ಬಂದಿಗಳಿಗೆ ಗೌಪ್ಯ ಮಾಹಿತಿ ಬಳಸಿ ಇನ್‌ಸೈಡರ್ ಟ್ರೇಡಿಂಗ್ ಅಥವಾ ಪ್ರೆಡಿಕ್ಷನ್ ಮಾರ್ಕೆಟ್‌ಗಳಲ್ಲಿ ಹಣ ಹೂಡದಂತೆ ಆಂತರಿಕ ಇಮೇಲ್ ಮೂಲಕ ಎಚ್ಚರಿಕೆ ನೀಡಿದೆ. ಆದರೆ ಟ್ರಂಪ್ ಕುಟುಂಬ ಮಾತ್ರ ಇದು ಸ್ವತಂತ್ರ ‘ಬ್ಲೈಂಡ್ ಟ್ರಸ್ಟ್’ ನಡೆಸುತ್ತಿರುವ ವ್ಯವಹಾರ ಎಂದು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿದೆ.

ಭಾರತದಲ್ಲಿ ಹೇಗೆ?
ಭಾರತದಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ SEBI (Securities and Exchange Board of India) ಇಂತಹ ಹಗರಣಗಳನ್ನು ತಡೆಯಲು LODR (Listing Obligations and Disclosure Requirements) ಎಂಬ ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಯಾವುದೇ ಲಿಸ್ಟೆಡ್ ಕಂಪನಿಯು ತನ್ನ ಷೇರು ಬೆಲೆಯ ಮೇಲೆ ಪರಿಣಾಮ ಬೀರುವ ಮಾಹಿತಿಯನ್ನು ಹೇಗೆ ಪ್ರಕಟಿಸಬೇಕು ಎಂಬ ನಿಯಮವಿದೆ.

ಬೋರ್ಡ್ ಮೀಟಿಂಗ್ ನಿರ್ಧಾರಗಳು: ಕಂಪನಿಯು ಡಿವಿಡೆಂಡ್ ಘೋಷಣೆ, ತ್ರೈಮಾಸಿಕ ಫಲಿತಾಂಶ (Quarterly Results), ಅಥವಾ ವಿಲೀನದ (Mergers) ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಭೆ ನಡೆಸಿದರೆ, ಆ ಸಭೆ ಮುಗಿದ ಕೇವಲ 30 ನಿಮಿಷಗಳ ಒಳಗಾಗಿ ಷೇರು ಮಾರುಕಟ್ಟೆಗೆ (NSE/BSE) ಅಧಿಕೃತ ದಾಖಲೆ ಸಲ್ಲಿಸಬೇಕು.

ಹೂಡಿಕೆದಾರರಲ್ಲಿ ಗೊಂದಲ ತಪ್ಪಿಸಲು ಬಹುತೇಕ ಕಂಪನಿಗಳು ತಮ್ಮ ಪ್ರಮುಖ ನಿರ್ಧಾರಗಳನ್ನು ಮತ್ತು ಫಲಿತಾಂಶಗಳನ್ನು ಮಧ್ಯಾಹ್ನ 3:30 ರ ನಂತರ ಅಥವಾ ಶನಿವಾರ/ಭಾನುವಾರ ಪ್ರಕಟಿಸುತ್ತವೆ. ಇದರಿಂದ ಹೂಡಿಕೆದಾರರಿಗೆ ಆ ಮಾಹಿತಿಯನ್ನು ಓದಿ, ವಿಶ್ಲೇಷಿಸಿ, ಮರುದಿನ ಬೆಳಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಮಾನ ಅವಕಾಶ ಸಿಗುತ್ತದೆ.

ಭಾರತ ಸರ್ಕಾರದ ನೀತಿ ಏನು?
ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಆರ್ಥಿಕ ನಿರ್ಧಾರಗಳು (ಉದಾಹರಣೆಗೆ: ಜಿಎಸ್‌ಟಿ ದರ ಬದಲಾವಣೆ, ಆಮದು-ರಫ್ತು ಸುಂಕದ ಬದಲಾವಣೆ, ಪ್ರಮುಖ ವಲಯಗಳ ಪ್ಯಾಕೇಜ್) ಇಡೀ ದೇಶದ ಷೇರು ಮಾರುಕಟ್ಟೆಯ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುತ್ತವೆ. ಭಾರತ ಸರ್ಕಾರದ ಪ್ರಮುಖ ಕ್ಯಾಬಿನೆಟ್ ನಿರ್ಧಾರಗಳು ಅಥವಾ ಹಣಕಾಸು ಸಚಿವಾಲಯದ ಪ್ರಕಟಣೆಗಳು ಸಾಮಾನ್ಯವಾಗಿ ಸಂಜೆ 4 ಅಥವಾ 5 ಗಂಟೆಯ ನಂತರ ಹೊರಬರುತ್ತವೆ.

ಮಾರುಕಟ್ಟೆ ಚಾಲನೆಯಲ್ಲಿರುವಾಗ ಇಂತಹ ನಿರ್ಧಾರಗಳು ಬಂದರೆ, ದೊಡ್ಡ ಇನ್ಸ್ಟಿಟ್ಯೂಷನಲ್ ಹೂಡಿಕೆದಾರರು ಸೆಕೆಂಡುಗಳಲ್ಲಿ ಷೇರುಗಳನ್ನು ಖರೀದಿಸಿ ಲಾಭ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ರಿಟೇಲ್ ಹೂಡಿಕೆದಾರರಿಗೆ ಟಿವಿ ಅಥವಾ ಮೊಬೈಲ್‌ನಲ್ಲಿ ಸುದ್ದಿ ತಿಳಿಯುವಷ್ಟರಲ್ಲಿ ಷೇರು ಕೈತಪ್ಪಿ ಹೋಗಿರುತ್ತದೆ. ಇದನ್ನು ತಡೆಯಲೇ ಸರ್ಕಾರ ಸಂಜೆಯ ಸಮಯವನ್ನು ಆರಿಸಿಕೊಳ್ಳುತ್ತದೆ.

ಟ್ರಂಪ್‌ ಅವರ ಒಂದೊಂದು ಪೋಸ್ಟ್ ಜಾಗತಿಕ ಮಾರುಕಟ್ಟೆಯನ್ನು ನಡುಗಿಸುವ ಶಕ್ತಿ ಹೊಂದಿದೆ. ಇಂತಹ ಸಂದರ್ಭದಲ್ಲಿ ಅವರ ಅಧಿಕೃತ ನಿರ್ಧಾರಗಳು ಪ್ರಕಟವಾಗುವ ಕೆಲವೇ ನಿಮಿಷಗಳ ಮೊದಲು ಅವರ ಹೆಸರಿನಲ್ಲೇ ಕೋಟ್ಯಂತರ ರೂಪಾಯಿ ಟ್ರೇಡಿಂಗ್ ಆಗುತ್ತಿರುವುದು ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ‘ಅಧಿಕಾರ ದುರುಪಯೋಗ’ದ ಆರ್ಥಿಕ ಹಗರಣದ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.



[ad_2]

Source link publictv.in

Leave a Reply

Your email address will not be published. Required fields are marked *