Advertisement

ನಕಲಿ ಸುಪ್ರೀಂ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ – 8 ವರ್ಷಗಳ ಬಳಿಕ ಕದೀಮನ ಕೃತ್ಯ ಬಯಲು | Public TV

[ad_1]

ಬೆಂಗಳೂರು: ಸುಪ್ರೀಂ ಕೋರ್ಟ್ (Supreme Court) ಹೆಸರಲ್ಲೇ ನಕಲಿ ಆದೇಶ ಪತ್ರ ಸೃಷ್ಟಿಸಿ, ಜೈಲಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಜೈಲಿನಿಂದ ಬಿಡುಗಡೆಯಾಗಿದ್ದ ಖತರ್ನಾಕ್ ಕೈದಿಯೊಬ್ಬನ ಹಗರಣ ಬರೋಬ್ಬರಿ ಎಂಟು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.

ತಮಿಳುನಾಡು (Tamil Nadu) ಮೂಲದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿ ಶಂಕರ್ ಆರ್ಮುಗಮ್ ಎಂಬಾತನ ಧೈರ್ಯ ಹಾಗೂ ವಂಚನೆಯ ಕಥೆ ಕೇಳಿ ಸ್ವತಃ ಪೊಲೀಸ್ ಇಲಾಖೆಯೇ ಈಗ ಬೆಚ್ಚಿಬಿದ್ದಿದೆ. ಈ ಮಹಾ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಪೊಲೀಸ್ ಠಾಣೆಯಲ್ಲಿ ದಾಖಲೆ ಫೋರ್ಜರಿ (ನಕಲು) ಮತ್ತು ವಂಚನೆ ಕಾಯ್ದೆಯಡಿ ಈಗ ಎಫ್‌ಐಆರ್‌ ದಾಖಲಾಗಿದೆ

ಇಡೀ ಹಗರಣದ ಹಿನ್ನೆಲೆ ನೋಡುವುದಾದರೆ, 2001 ರಲ್ಲಿ ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್, ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿತ್ತು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಶಂಕರ್‌ನನ್ನು ಅಪರಾಧಿ ಎಂದು ಘೋಷಿಸಿತ್ತು.

ಐಪಿಎಸ್ ಸೆಕ್ಷನ್ 364A (ಹಣಕ್ಕಾಗಿ ಅಪಹರಣ) ಮತ್ತು ಸೆಕ್ಷನ್ 120B (ಅಪರಾಧಿಕ ಸಂಚು) ಅಡಿಯಲ್ಲಿ ನ್ಯಾಯಾಲಯವು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಕೋರ್ಟ್ ಆದೇಶದಂತೆ ಆರೋಪಿ ಶಂಕರ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಜೈಲಿನಲ್ಲಿದ್ದ ಶಂಕರ್ ಆರ್ಮುಗಮ್ ಬಿಡುಗಡೆಯಾಗಲು ಸಿನಿಮೀಯ ಶೈಲಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ. ತನಗೆ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಆದೇಶ ಸಿಕ್ಕಿದೆ ಎಂದು ಬಿಂಬಿಸುವ ಹುದ್ದೇಶದಿಂದ ಸುಪ್ರೀಂ ಕೋರ್ಟ್ ಮುದ್ರೆ ಹಾಗೂ ಸಹಿ ಇರುವ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ.

ನವೆಂಬರ್ 13, 2018 ರಂದು ಈ ನಕಲಿ ಆದೇಶ ಪತ್ರದೊಂದಿಗೆ 10 ಸಾವಿರ ದಂಡವನ್ನು ಶಂಕರ್ ಕಡೆಯುವರು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪಾವತಿಸಿದ್ದರು. ಸುಪ್ರೀಂ ಆದೇಶ ಪತ್ರ ಸಲ್ಲಿಕೆಯಾದ ಕಾರಣ ಶಂಕರ್ ಆರ್ಮುಗಮ್ ರಾಜಾರೋಷವಾಗಿ ಜೈಲಿನಿಂದ ಬಿಡುಗಡೆಯಾಗಿ ಪರಾರಿಯಾಗಿದ್ದ. ಇದನ್ನೂ ಓದಿ: ಭದ್ರಾವತಿಯಲ್ಲಿ ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ – ಪ್ರಕರಣ ದಾಖಲು

SUPREME COURT 3

ಈಗ ಬೆಳಕಿಗೆ ಬಂದಿದ್ದು ಹೇಗೆ?
ಅಧಿಕಾರಿಗಳ ಕಣ್ಣು ತಪ್ಪಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ಶಂಕರ್ ಕಥೆ ಸುಖಾಂತ್ಯ ಕಂಡಿತು ಎನ್ನುವಾಗಲೇ ಟ್ವಿಸ್ಟ್ ಸಿಕ್ಕಿದೆ. ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ (DG) ಒಂದು ಆಘಾತಕಾರಿ ಅನಾಮಧೇಯ ಪತ್ರ ಬಂದಿತ್ತು. ಆ ಪತ್ರದಲ್ಲಿ ಶಂಕರ್ ನಕಲಿ ದಾಖಲೆ ನೀಡಿ ಓಡಿಹೋಗಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.

ಈ ಅನಾಮಧೇಯ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಆಂತರಿಕ ತನಿಖೆಗೆ ಆದೇಶಿಸಿತ್ತು. ತನಿಖೆಯ ವೇಳೆ ಸುಪ್ರೀಂ ಕೋರ್ಟ್‌ನಿಂದ ಅಂತಹ ಯಾವುದೇ ಬಿಡುಗಡೆ ಆದೇಶ ಬಂದೇ ಇಲ್ಲ, ಶಂಕರ್ ಸಲ್ಲಿಸಿದ್ದು ನಕಲಿ ಪತ್ರ ಎಂಬ ಕಹಿ ಸತ್ಯ ಹೊರಬಿದ್ದಿದೆ.

ಜೈಲಧಿಕಾರಿಗಳು ಶಾಮೀಲು
ವಿಷಯ ಬೆಳಕಿಗೆ ಬರುತ್ತಿದ್ದಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶಂಕರ್ ಆರ್ಮುಗಮ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶವನ್ನು ಜೈಲು ಅಧಿಕಾರಿಗಳು ಮರು ಪರಿಶೀಲನೆ ಮಾಡದೆ ಬಿಡುಗಡೆ ಮಾಡಿದ್ದು ಹೇಗೆ? ಇದರಲ್ಲಿ ಜೈಲು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವಿದೆಯೇ ಅಥವಾ ಅವರೂ ಸಹ ಆರೋಪಿಯೊಂದಿಗೆ ಶಾಮೀಲಾಗಿದ್ದಾರೆಯೇ? ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ ಎಂದು ಜೈಲಿನ ಉನ್ನತ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

[ad_2]

Source link publictv.in

Leave a Reply

Your email address will not be published. Required fields are marked *