[ad_1]

ಧಾರವಾಡ/ವಿಜಯನಗರ/ರಾಯಚೂರು: ಉತ್ತರ ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಇಂದು ಸಹ ವಿಜಯನಗರ, ರಾಯಚೂರು, ಗದಗ ಮತ್ತು ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಇಲಾಖೆ ಪ್ರಕಾರ, ಮುಂದಿನ 3 ದಿನಗಳಲ್ಲಿ ಮುಂಗಾರು ಕೇರಳ ತಲುಪುವ ಸಾಧ್ಯತೆ ಇದ್ದು, ಜೂನ್ 1ರ ವೇಳೆಗೆ ಕರ್ನಾಟಕಕ್ಕೂ ಪ್ರವೇಶಿಸಬಹುದು. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಗುಡುಗು-ಸಿಡಿಲು ಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ವಿಜಯನಗರ
ವಿಜಯನಗರ ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಕೂಡ್ಲಿಗಿ ತಾಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಕೆಇಬಿ ಕಚೇರಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 50ರ ಸರ್ವೀಸ್ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಕಮಲಾಪುರದಲ್ಲಿ ಚರಂಡಿ ನೀರು ರೈತರ ಜಮೀನಿಗೆ ಹರಿದು ಬಾಳೆ ತೋಟಗಳಿಗೆ ಹಾನಿಯಾಗಿದೆ. ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಸರಿಯಾದ ಚರಂಡಿ ವ್ಯವಸ್ಥೆ ಮಾಡದ ಪರಿಣಾಮ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೊಸಪೇಟೆ-ಬಳ್ಳಾರಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ರಾಯಚೂರು
ಜಿಲ್ಲೆಯ ಸಿಂಧನೂರು ತಾಲೂಕಿನ ಚಿರ್ತನಾಳ-ಬೊಮ್ಮನಾಳ ನಡುವಿನ ತಾತ್ಕಾಲಿಕ ಸೇತುವೆ ಭಾರೀ ಮಳೆಗೆ ಕೊಚ್ಚಿಹೋಗಿದೆ. ಇದರಿಂದ 4-5 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಹಳ್ಳ ದಾಟಲು ಪರದಾಡುತ್ತಿದ್ದಾರೆ. ಮಾವಿನಬಾವಿ ಗ್ರಾಮದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ರಾತ್ರಿಯಿಡೀ ನೀರು ಹೊರಹಾಕುವ ಕೆಲಸದಲ್ಲಿ ತೊಡಗಿದ್ದರು. ಲಿಂಗಸುಗೂರು ತಾಲೂಕಿನಲ್ಲಿ ಸಿಡಿಲು ಬಡಿದು ಮೂರು ಎತ್ತು, ಒಂದು ಆಕಳು ಹಾಗೂ ಒಂದು ಎಮ್ಮೆ ಸಾವನ್ನಪ್ಪಿವೆ. ಪಿಕಳಿಹಾಳ ಗ್ರಾಮದಲ್ಲಿ 14 ಎಕರೆ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ರಾಯಚೂರು ಮಾರ್ಗವಾಗಿ ಹೈದರಾಬಾದ್‌ಗೆ ತೆರಳುತ್ತಿದ್ದ ರಾಜಹಂಸ ಬಸ್‌ಗೆ ಮಳೆ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ರಾತ್ರಿ ಪೂರ್ತಿ ಪರದಾಡಿದ್ದಾರೆ.

ಗದಗ
ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಬಳಿ ಅಗಸರ ಹಳ್ಳ ತುಂಬಿ ಹರಿದ ಪರಿಣಾಮ ಸೇತುವೆ ಮೇಲೆಯೇ ನೀರು ಹರಿದಿದೆ. ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿ ರೈತರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಪರದಾಡಿದರು. ಮಳೆ ನೀರು ಜಮೀನಿಗೆ ನುಗ್ಗಿ ರೈತರ ಹೊಲಗಳು ಜಲಾವೃತಗೊಂಡಿವೆ.
ಕೊಪ್ಪಳ
ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಬಳಿ ಭಾರೀ ಗಾಳಿ ಮಳೆಗೆ ಬೃಹತ್ ಮರ ನೆಲಕ್ಕುರುಳಿದೆ. ಇರಕಲ್ ಗಡ ಗ್ರಾಮದಲ್ಲಿ ಬಸ್ ನಿಲ್ದಾಣದ ಮೇಲ್ಚಾವಣಿ ಕಿತ್ತು ಹೋಗಿ ಕಬ್ಬಿಣದ ಕಂಬ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
[ad_2]
Source link publictv.in

















Leave a Reply