[ad_1]
ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಪರೀಕ್ಷೆಗೆ ಹಾಜರಾದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಂದಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಶೇ. 94.1ರಷ್ಟು ಫಲಿತಾಂಶ ಸಾಧನೆಯ ಮೂಲಕ ಈ ಬಾರಿ ಕರ್ನಾಟಕ ಹೊಸ ದಾಖಲೆಯನ್ನು ನಿರ್ಮಿಸಿದೆ.
ದಾವಣಗೆರೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದಾವಣಗೆರೆ ಜಿಲ್ಲೆಗೆ 19ನೇ ಸ್ಥಾನ
ಜಿಲ್ಲಾವಾರು ಫಲಿತಾಂಶದಲ್ಲಿ ಶೇ. 98.40 ತೇರ್ಗಡೆ ಪ್ರಮಾಣದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಇತ್ತ ಶೇ. 85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ಒಟ್ಟು ಏಳು ಮಂದಿ ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದು ಪರಿಪೂರ್ಣ ಸಾಧನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣವೆಬಿಳಚಿ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿ ಭರತ್ ಜಿ. 625 ಅಂಕಗಳನ್ನು ಪಡೆದು ಮೆರೆದಿದ್ದಾರೆ. ಇವರು ಗಿರೀಶ್‌ರಾವ್ ಮತ್ತು ಶಿಲ್ಪಾ ದಂಪತಿಯ ಪುತ್ರರಾಗಿದ್ದಾರೆ.
625ಕ್ಕೆ 625 ಅಂಕಗಳೊಂದಿಗೆ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ ತಮ್ಮ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಣಿವೆ ಬಿಳಚಿ ಗ್ರಾಮದ ಜಿ ಭರತ್ ಅವರಿಗೆ ಶಾಸಕ ಬಸವಂತಪ್ಪ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನ ಇದ್ದರೆ ಯಾವುದೇ ಗುರಿಯೂ ಅಸಾಧ್ಯವಲ್ಲ ಎಂಬುದನ್ನು ನಿಮ್ಮ ಅದ್ಭುತ ಸಾಧನೆ ಮತ್ತೆ ಸಾಬೀತುಪಡಿಸಿದೆ.ಗ್ರಾಮೀಣ ಭಾಗದಿಂದ ಬಂದ ಪ್ರತಿಭೆಯಾಗಿ ನೀವು ಸಾಧಿಸಿರುವ ಈ ಯಶಸ್ಸು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ನಿಮ್ಮ ಕುಟುಂಬ, ಶಾಲೆ ಹಾಗೂ ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸ್‌ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯಾ ಕೂಡ 625ರಲ್ಲಿ 625 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರ್ ನಾರಾಯಣದ ಮದರ್ ತೆರೇಸಾ ಮೆಮೊರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ಕೂಡ 625 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಕುಟುಂಬ ಹಾಗೂ ಶಾಲೆಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್ ಹಾಗೂ ರಾಯಚೂರಿನ ಸುಖದೇವ್ ಕೂಡ 625ರಲ್ಲಿ 625 ಅಂಕಗಳನ್ನು ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದು ಕುಟುಂಬ, ಶಾಲೆ ಮತ್ತು ತಮ್ಮ ಊರಿಗೆ ಕೀರ್ತಿ ತಂದಿದ್ದಾರೆ.
[ad_2]
Source link

















Leave a Reply