ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಮಾ. 24ರಂದು ಬೆಳಗ್ಗೆ 10.30ಕ್ಕೆ ಹಿರಿಯ ನಾಗರಿಕರು ರಾಜ್ಯಮಟ್ಟದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಸುದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ನೆಹರು ಮೈದಾನದಿಂದ ಪ್ರಾರಂಭಗೊಳ್ಳುವ ಮೆರವಣಿಗೆಗೆ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಚಾಲನೆ ನೀಡುವರು ಬಳಿಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯದ ಸುಮಾರು 80 ಲಕ್ಷ ಹಿರಿಯ ನಾಗರಿಕರಲ್ಲಿ ಮುಕ್ಕಾಲು ಭಾಗ ಬಡವರಿದ್ದಾರೆ. ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು. ದೇಶವ್ಯಾಪಿ ಏಕರೂಪ ಹಕ್ಕುಗಳು, ವೃದ್ಧಾಪ್ಯ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ ರಚಿಸಿ, ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು.
ರೈಲ್ವೆ ರಿಯಾಯಿತಿ ಪುನರಾರಂಭಿಸಬೇಕು. ಪ್ರತಿ ಜಿಲ್ಲೆಗೆ ಒಂದು ಹಿರಿಯ ನಾಗರಿಕ ಭವನ ನಿರ್ವಿುಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ನಾಗರಿಕ ಜೀವನ ಗೌರವ ಅಭಿಯಾನ ರಾಷ್ಟ್ರೀಯ ಅಧ್ಯಕ್ಷ ವಿಜಯ ದೇಶಮುಖ, ಹಿರಿಯ ನಾಗರಿಕರ ಸಲಹೆಗಾರ ಡಾ. ಸ್ವಾಮಿ ಕಮಲ ಮನೋಹರ, ಅಖಿಲ ಭಾರತ ಹಿರಿಯ ನಾಗರಿಕರ ಮಹಾಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ಕಾರ್ವಿುಕ ಧುರೀಣ ಡಾ. ಕೆ.ಎಸ್. ಶರ್ಮಾ ಹಾಗೂ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಡಾ. ಲಿಂಗರಾಜ ಅಂಗಡಿ, ಡಿ.ಡಿ. ಪಾಟೀಲ, ಧರಣೇಂದ್ರ ಜವಳಿ, ಸುನಂದಾ ಬೆನ್ನೂರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು
















Leave a Reply